ಮೂತ್ರಪಿಂಡ - 
ರಕ್ತದಲ್ಲಿ ಲೀನವಾಗಿದ್ದು ರಕ್ತದಿಂದ ವರ್ಜಿತವಾಗಬೇಕಾದ ವಸ್ತುವನ್ನು ಮೂತ್ರರೂಪದಲ್ಲಿ ಉತ್ಪಾದಿಸುವ ಅಂಗ (ಕಿಡ್ನಿ).  ಎಡ ಮತ್ತು ಬಲ ಎಂದು ಎರಡು ಮೂತ್ರಪಿಂಡಗಳು ಇವೆ.  ಇವು ಮೂತ್ರಮಂಡಲದ ಮುಖ್ಯ ಅಂಗಗಳು, ಮಿಕ್ಕವು 2 ಮೂತ್ರಪಿಂಡ ನಾಳಗಳು, ಮೂತ್ರಕೋಶ ಮತ್ತು ಮೂತ್ರ ಕೋಶನಾಳ.

	ಮೂತ್ರಪಿಂಡ ಅಥವಾ ಮೂತ್ರಜನಕಾಂಗವನ್ನು ಗ್ರಂಥಿ ಎಂದು ವಿವರಿಸಬಹುದಾದರೂ ವಾಸ್ತವವಾಗಿ ಅದು ವಿಸರ್ಜಿತವಾಗಬೇಕಾದ ವಸ್ತುಗಳನ್ನು ಯಾವ ಪ್ರಚೋದನೆಯೂ ಇಲ್ಲದೆ ನಿರಂತರವಾಗಿ ರಕ್ತದಿಂದ ಬೇರ್ಪಡಿಸುವ ಶುದ್ಧೀಕರಣಾಂಗ.  ಪುಪ್ಪುಸಗಳು ಅನಿಲ ಇಂಗಾಲಾಮ್ಲವನ್ನು ಹೊರಕ್ಕೆ ಕಳುಹಿಸಿ ರಕ್ತವನ್ನು ಶುದ್ಧೀಕರಿಸುತ್ತವೆ.  ಮೂತ್ರಪಿಂಡಗಳು ನೀರಿನಲ್ಲಿ ವಿಲೀನವಾಗುವ ಯೂರಿಯ ಮುಂತಾದ ಘನವಸ್ತುಗಳನ್ನು ದೇಹದಿಂದ ಆಚೆಗೆ ಕಳುಹಿಸಿ ಸ್ವಚ್ಛೀಕರಿಸುತ್ತವೆ.  ಮೂತ್ರಪಿಂಡ ರಕ್ತವನ್ನು ಶೋಧಿಸಿ ಕಣಗಳು ಹಾಗೂ ಪ್ರೋಟೀನುಗಳನ್ನು ಬಿಟ್ಟು ಮಿಕ್ಕ ನೀರಿನಂಥ ಭಾಗವನ್ನು ಬೇರ್ಪಡಿಸಿ ಆಮೇಲೆ ಅದರಿಂದ ದೇಹಕ್ಕೆ ಬೇಕಾದ ಗ್ಲೂೀಕೋಸ್, ಬೇಕಾದಷ್ಟು ಲವಣ ಇತ್ಯಾದಿಗಳನ್ನು ನೀರಿನೊಡನೆ ಪುನಃ ಹೀರುತ್ತವೆ. 
 ದೇಹಕ್ಕೆ ಬೇಡದ ವಿಷಮಯ ಪದಾರ್ಥ ಇತ್ಯಾದಿಗಳಿರುವ ಉಳಿದ ದ್ರವವೇ ಮೂತ್ರ.  ಮೂತ್ರ ಪಿಂಡಗಳು ಕೆಟ್ಟರೆ ಪ್ರಾಣಕ್ಕೆ ಅಪಾಯ.  ಈಚೆಗೆ ಡಯಾಲಿಸಿಸ್ (ಪಾರಪೃಥಕ್ಕರಣ) ಉಪಕರಣದಿಂದ ರಕ್ತವನ್ನು ಶುದ್ಧಿಮಾಡುತ್ತ ಹಲವು ತಿಂಗಳು ಪ್ರಾಣವನ್ನು ಕಾಪಾಡುವ ತಂತ್ರವಿದೆ. ರೋಗಿಯ ದೇಹ ಸಾಮ್ಯವಿರುವ ದಾನಿಯ ಮೂತ್ರಪಿಂಡವನ್ನು ಅಳವಡಿಸುವ ಶಸ್ತ್ರವೈದ್ಯತಂತ್ರವೂ ಅಭಿವರ್ಧಿಸಿದೆ.

	ಬಲ ಎಡ ಮೂತ್ರಪಿಂಡಗಳು ಬೆನ್ಮೂಳೆಯ ಬಲ ಎಡ ಪಕ್ಕಗಳಲ್ಲಿ, ಹೊಕ್ಕಳಿಂದ ಮೇಲ್ಮಟ್ಟದಲ್ಲಿ, ಜಠರ, ಕರುಳು, ಮೇದೋಜೀರಕಾಂಗ, ಉದರ ಪರಿವೇಷ್ಟನಗಳ ಹಿಂದೆ ಹುರುಳಿ ಬೀಜಾಕಾರದಲ್ಲಿದೆ. ವಪೆಗೆ ಅಂಟಿರುವುದರಿಂದ ಉಸಿರಿನೊಡನೆ ಮೇಲು ಕೆಳಕ್ಕಾಡುತ್ತ ಇರುತ್ತದೆ.  ಬಲಗುಮ್ಮಟದ ಕೆಳಗೆ ಪಿತ್ತಜನಕಾಂಗವಿರುವುದರಿಂದ ನೆಟ್ಟ ನಿಲುವಿನಲ್ಲಿ ಮನುಷ್ಯನಲ್ಲಿ ಬಲ ಮೂತ್ರ ಪಿಂಡ ಎಡ ಪಿಂಡಕ್ಕಿಂತ ಸ್ವಲ್ಪ ಕೆಳಮಟ್ಟದಲ್ಲಿದೆ ಚತುಷ್ಟಾದಿಗಳಲ್ಲಿ ಯಕೃತ್ತಿನ ಭಾರ ಬೀಳದಿರುವುದರಿಂದ ಬಲಮೂತ್ರಪಿಂಡ ಎಡಪಿಂಡಕ್ಕಿಂತ ತಲೆಯ ಕಡೆಗೆ ಮುಂದಿದೆ.  ಮನುಷ್ಯನ ಪ್ರತಿಯೊಂದು ಮೂತ್ರಪಿಂಡದ ದೀರ್ಘಾಕ್ಷ ಬೆನ್ಮೂಳೆಗೆ ಸಮಾಂತರವಾಗಿದೆ.  ಮೂತ್ರಪಿಂಡದ ಉದ್ದ 11 ಸೆಂಮೀ. ಅಗಲ 7ರಿಂದ 7.5ಸೆಂಮೀ, ದಪ್ಪ (ಹಿಂದು ಮುಂದು) 2.5 ಸೆಂಮೀಗಿಂತ ತುಸು ಹೆಚ್ಚಿರಬಹುದು.  ತೂಕ ಗಂಡಿನಲ್ಲಿ 125-170 ಗ್ರಾಮ್.  ಹೆಣ್ಣಿನಲ್ಲಿ 115-155 ಗ್ರಾಮ್.  ಎರಡೂ ಮೂತ್ರಪಿಂಡಗಳ ತೂಕ ದೇಹ ತೂಕದ 1/240ರಷ್ಟು.  ಹುಟ್ಟಿದ ಮಗುವಿನಲ್ಲಿ ಎರಡೂ ಮೂತ್ರ ಪಿಂಡಗಳ ತೂಕ ಮಗುವಿನ ತೂಕದ 1/80ರಷ್ಟು.

	ಮೂತ್ರಪಿಂಡದ ಸಾಮಾನ್ಯ ರಚನೆ : ಮೂತ್ರಪಿಂಡದ ಕವಚ ನುಣ್ಣಗೆ ಬಿಗಿಯಾಗಿದೆ.  ಆದರೆ ಕವಚವನ್ನು ಸುಲಭವಾಗಿ ಸುಲಿದು ತೆಗೆಯಬಹುದು.  ಕವಚಕ್ಕೆ ಅಂಟಿಕೊಳ್ಳಲು ಒಳ ಆಧಾರ ನಾರಳೆಗಳಿಲ್ಲದಿರುವುದೇ ಇದರ ಕಾರಣ.  ಕವಚ ಸುಲಿದಾಗ ಪಿಂಡದ ಮೇಲ್ಮೈ ನುಣ್ಣಗಿರುತ್ತದೆ.  ಜೀವಂತವಿದ್ದರೆ ದಟ್ಟ ಕೆಂಪಾಗಿರುತ್ತದೆ.  ಕೈಕೂಸಿನ ಮೂತ್ರಪಿಂಡದ ಮೇಲೆ ಸುಮಾರು ಹನ್ನೆರಡು ಹಾಲೆಗಳು ಉಬ್ಬಿ, ಅವುಗಳ ನಡುವೆ ಪ್ರತ್ಯೇಕಿಸುವ ಗಾಡಿಗಳು ಕಾಣುತ್ತವೆ.  ಇವಲ್ಲದೆ ಮೂತ್ರಪಿಂಡ ಅಪಧಮನಿಯ ಐದು ಶಾಖೆಗಳು ರಕ್ತ ಒದಗಿಸುವ ಭಾಗಗಳಿವೆ.  ಈ ಶಾಖೆಗಳ ಉಪಶಾಖೆಗಳೂ ಅಡ್ಡ ಸೇರದಿರುವುದರಿಂದ ಯಾವ ಒಂದು ಶಾಖೆಯಲ್ಲಿ ಅಡಚಣೆಯಾದರೂ ಆ ಶಾಖೆ ರಕ್ತ ಒದಗಿಸುವ ಮೂತ್ರಪಿಂಡ ಭಾಗಕ್ಕೆ ರಕ್ತವಿಲ್ಲದೆ ಅದು ಸತ್ತು ನಾರು ಕಟ್ಟುತ್ತದೆ.  ಹೊರಪಕ್ಕ ಒಳಪಕ್ಕ ಅಂಚುಗಳ ಮೂಲಕ ಲಂಬವಾಗಿ ಅರ್ಧಕ್ಕೆ ಕೊಯ್ದರೆ ಮೂತ್ರಪಿಂಡದ ನಾಭಿಯ ವಿಶಾಲಕುಹರ ಪಿಂಡದ ಮಧ್ಯೆ ಕಾಣುತ್ತದೆ.  ಇದರಲ್ಲಿ ಮೂತ್ರಪಿಂಡನಾಳದ ಮೇಲ್ಕೊನೆಯ ವಿಸ್ತøತಭಾಗವಾದ ಅದರ ಶ್ರೋಣಿ ಮತ್ತು ಅದರ ಶಾಖೆಗಳಾದ ಸಾಧಾರಣವಾಗಿ ಎರಡು ದೊಡ್ಡ ಕೇಲಿಕ್ಸ್‍ಗಳೂ ಉಪಶಾಖೆಗಳಾದ 4 ರಿಂದ 13 ಕಿರುಕೇಲಿಕ್ಸ್‍ಗಳೂ (ಪಾತ್ರ) ಜೊತೆಗೆ ರಕ್ತನಾಳ ನರಗಳೂ ಕೊಬ್ಬಿನಲ್ಲಿ ಹುದುಗಿರುತ್ತವೆ.  ಕಿರುಕೇಲಿಕ್ಸ್‍ಗಳು ಒಂದೊಂದು ಪಿರಮಿಡ್ಡನ್ನು ಆವರಿಸಿರುವ ಬಟ್ಟಲು ಕೊನೆಗಳಿರುವ ಕೊಳವೆಗಳು.  ಕೆಲವು ಎರಡು ಅಥವಾ ಹೆಚ್ಚು ಪಿರಮಿಡ್ಡುಗಳನ್ನು ಆವರಿಸಿರಬಹುದು.  ಕಿರುಕೇಲಿಕ್ಸ್‍ಗಳು ಒಂದು ಗೂಡಿ 2-3 ದೊಡ್ಡ ಪಾತ್ರನಾಳಗಳಾಗಿ ಇವು ಒಂದುಗೂಡಿ ಪನ್ನಾಲೆಯಂಥ ಮೂತ್ರಪಿಂಡ ನಾಳದ ಶ್ರೋಣಿಯಾಗುತ್ತದೆ.  ಕೇಲಿಕ್ಸ್ ಭಿತ್ತಿಗಳಲ್ಲಿರುವ ಸುರುಳಿ ಸ್ನಾಯುಗಳ ಸಂಕೋಚನದಿಂದ ಮೂತ್ರ ಹೆಚ್ಚು ಸುಲಭವಾಗಿ ಶ್ರೋಣಿಗೆ ಹರಿಯುತ್ತದೆ.  ಮೂತ್ರಪಿಂಡದ ನಾಭಿಕುಳಿಯನ್ನು ಬಿಟ್ಟು ಬಳಿಕ ಶ್ರೋಣಿ ಕ್ರಮೇಣ ಚಿಕ್ಕದಾಗುತ್ತ ಮೂತ್ರಪಿಂಡ ನಾಳವಾಗುತ್ತದೆ.

	ಮೂತ್ರಪಿಂಡದ ಹೊರಭಾಗವಾಗಿ ಕಾರ್ಟೆಕ್ಸ್ ಮತ್ತು ಒಳಭಾಗವಾಗಿ ಮೆಡ್ಯುಲ್ಲ ಇವೆ.  ಕಿರಣಗಳಂತೆ ಗೆರೆಗಳು ಮೂತ್ರಪಿಂಡದ ಅಂಚು ಅಂಚಿನ ಉದ್ದ ಕೊಯ್ತದಲ್ಲಿ ಕಾಣುತ್ತವೆ.  ಮೆಡ್ಯುಲದ ವಸ್ತು 8-18 ಪಿರಮಿಡ್ಡುಗಳಾಗಿ ಅವುಗಳ ತುದಿಗಳು ಕಿರುಕೇಲಿಕ್ಸ್‍ಗಳು ಬಟ್ಟಲುಗಳೊಳಕ್ಕೆ ಚಾಚುತ್ತವೆ.  ಕಾರ್ಟೆಕ್ಸಿನ ಬಣ್ಣ ಕೆಂಪು ಕಂದು, ಅದು ಮೃದುವಾಗಿ ತರಿತರಿಯಾಗಿದೆ.  ಕವಚದ ಕೆಳಗೆ ಪಿರಮಿಡ್ಡುಗಳ ಅಡಿಗಳನ್ನು ಬಳಸಿ ಅವುಗಳ ನಡುವೆ ಕಾರ್ಟೆಕ್ಸ್ ತೂರಿದೆ.  ಹೀಗೆ ಪಿರಮಿಡ್ ಅಡಿಗಳ ನಡುವೆ ಇರುವ ಕಾರ್ಟೆಕ್ಸ್ ಭಾಗಗಳಿಗೆ ಮೂತ್ರಪಿಂಡಕಂಬಗಳು ಎಂದು ಹೆಸರು.  ಕಾರ್ಟೆಕ್ಸ್ ಮೆಡ್ಯುಲ ಸಂಧಿಭಾಗ ಗಡಿವಲಯ.  ಕಾರ್ಟೆಕ್ಸನ್ನು ಭೂತಕನ್ನಡಿಯಲ್ಲಿ ನೋಡಿದರೆ ಕೆಂಪು ಕಂದು ಬಣ್ಣ ಕಮ್ಮಿಯುಳ್ಳ ಕಿರಣ (ಅಪಸರಣ) ಭಾಗಗಳೂ ಅವುಗಳ ನಡುವೆ ಹೆಚ್ಚು ಬಣ್ಣದ ಸಂಕೀರ್ಣ ಭಾಗಗಳೂ ಕಾಣುತ್ತವೆ.  ಮೂತ್ರಪಿಂಡದ ಕವಚದ ಕಡೆಗೆ ಕಿರಣಗಳು ಸಣ್ಣದಾಗುತ್ತದೆ.  ಅವು ಪಿರಮಿಡ್ಡಿನ ಅಡಿಗಳಿಂದ ಪರಿಧಿಗೆ ಹೋಗುತ್ತವೆ.

	ಕ್ರಿಯಾವಿಧಾನ : ಇತರ ಗ್ರಂಥಿಗಳಂತೆ ಮೂತ್ರಪಿಂಡಗಳು ಯಾವುದೋ ಪ್ರಚೋದನೆಯ ಫಲವಾಗಿ ಸ್ರವಿಸುವುದಿಲ್ಲ.  ಬದಲಾಗಿ ರಕ್ತವನ್ನು ಸೋಸುತ್ತವೆ.  ಮತ್ತು ಸೋಸಿದ ದ್ರವದಲ್ಲಿರುವ ದೇಹಾವಶ್ಯಕ ವಸ್ತುಗಳನ್ನು ಪುನಃ ಹೀರುತ್ತವೆ.  ಈ ರೀತಿ ಮೂತ್ರಪಿಂಡಗಳು ರಕ್ತದ ರಚನೆ, ಆಮ್ಲತ್ವ (ಠಿಊ) ಮತ್ತು ವಿಲೀನವಾಗಿರುವ ವಸ್ತುಗಳ ಸೂಕ್ಷ್ಮಾಭಿಸರಣ ಒತ್ತಡ ಇತ್ಯಾದಿಗಳನ್ನು ಒಂದೇ ಸಮವಾಗಿಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.  ದೇಹದಲ್ಲಿ ಉತ್ಪತ್ತಿಯಾದ ಅಪ್ರಯೋಜಕ ಹಾಗೂ ಹಾನಿಕರ ವಸ್ತುಗಳನ್ನೂ ದೇಹಕ್ಕೆ ಪರಕೀಯವಾದ ವಿಷ ಇತ್ಯಾದಿ ವಸ್ತುಗಳನ್ನೂ ಮೂತ್ರರೂಪದಲ್ಲಿ ದೇಹದಿಂದಾಚೆಗೆ ಸಾಗಿಸಿ ರಕ್ತವನ್ನು ಶುದ್ಧಿ ಮಾಡುವುದು ಇವುಗಳ ಅತಿ ಮುಖ್ಯ ಕ್ರಿಯೆ.

	ಪ್ರತಿ ಮಿನಿಟಿನಲ್ಲೂ ದೇಹ ರಕ್ತದ 1/5 ಭಾಗ ಮೂತ್ರಪಿಂಡದಲ್ಲಿ ಹರಿಯುತ್ತದೆ.  ಪ್ರತಿ ದಿನವೂ ಬೋಮನ್ ಕವಚಗಳೊಳಕ್ಕೆ ಸುಮಾರು 1.0 ಲೀಟರುಗಳಷ್ಟು, ರಕ್ತದಿಂದ ಶೋಧಿತ ದ್ರವ ಹರಿಯುತ್ತದೆ.  ಅಂದರೆ ಮಿನಿಟಿಗೆ 140 ಮಿಲಿ ಲೀಟರುಗಳು.  ರಕ್ತದ ಒತ್ತಡವೇ ಸೋಸಲು ಆವಶ್ಯಕವಾದ ಒತ್ತಡ.  ಅಪಧಮನಿಗಿಂತ ಅಭಿಧಮನಿ ಕಿರಿದಾಗಿರುವುದರಿಂದ ಲೋಮನಾಳ ಗುಚ್ಛದಲ್ಲಿ ಸ್ವಲ್ಪ ಏರಿದ ಒತ್ತಡವಿದ್ದು ಸೋಸುವುದಕ್ಕೆ ಸಹಾಯಕಾರಿ.  ಬೋಮನ್ ಕವಚದೊಳಗಿನ ದ್ರವ ಪ್ರೋಟಿನ್, ಕೊಬ್ಬು ಮತ್ತು ಕಣಗಳಿಲ್ಲದ ರಕ್ತ.  ಸೋಸಿಕೆ ಬರಿಯ ಭೌತಿಕ ಕಾರ್ಯ.  ಇದು ಮಾಲ್ಪಿಘಿ ಸೂಕ್ಷ್ಮಾಂಗಗಳ ಕಾರ್ಯ.

	ಸೂಕ್ಷ್ಮಾಂಗಗಳಲ್ಲಿ ಶೋಧನೆಯಾದ ದ್ರವದಿಂದ ಗ್ಲೂಕೋಸ್, ಅಮೈನೋ ಆಮ್ಲಗಳೂ, ಅಜೈವಿಕ ಅಯಾನುಗಳು ಮತ್ತು ದೇಹಾವಶ್ಯಕ ನೀರು ಇವನ್ನು ನಾಳಗಳು ಹೀರುತ್ತವೆ.  ಯೂರಿಯ ಮುಂತಾದ ಅಂತರ್ದಹನ ಮತ್ತು ಉಪಾಪಚಯಗಳಿಂದಾಗುವ ಅಪ್ರಯೋಜಕ ಹಾನಿಕರ ವಸ್ತುಗಳ ಮರುಹೀರಿಕೆಯಾಗದೆ ದೇಹಕ್ಕೆ ಅನಾವಶ್ಯಕವಾದ ನೀರಿನೊಡನೆ ಮುಂದೆ ಸಾಗುತ್ತವೆ.  ಹೆನ್ಲಿ ಕುಣಿಕೆಯ ಸಣಕಲು ಭಾಗದಲ್ಲಿರುವ ದ್ರವ ರಕ್ತದಷ್ಟೆ ಸೂಕ್ಷ್ಮಾಭಿಸರಣ ಒತ್ತಡ ಹೊಂದಿರುತ್ತದೆ.  ಸಣಕಲು ಇಳಿಯುವ ಭಾಗದಲ್ಲಿ ಅಗ್ರಭಾಗದಿಂದ ಅಂತ್ಯಭಾಗದವರೆಗೂ ನೀರಿನ ಹೀರಿಕೆಯಾಗಿ ಸೋಡಿಯಮ್ ಸೇರುತ್ತ ಸೂಕ್ಷ್ಮಾಭಿಸರಣ ಒತ್ತಡ ಹೆಚ್ಚುತ್ತದೆ.  ಏರುವ ಶಾಖೆಯಲ್ಲಿ ಅದು ಏರುತ್ತ ಹೋದಂತೆ ರಕ್ತಕ್ಕೆ ಸೋಡಿಯಮ್ ಸೇರಿ ಸೂಕ್ಷ್ಮಾಭಿಸರಣ ಒತ್ತಡ ಕಮ್ಮಿಯಾಗುತ್ತದೆ.  ಎರಡನೆಯ ವಕ್ರನಾಳದಲ್ಲಿ ದೇಹಕ್ಕೆ ಇನ್ನೂ ಅಗತ್ಯವೆನ್ನುವಷ್ಟು ಸೋಡಿಯಮ್ ರಕ್ತಕ್ಕೆ ಸೇರಿ ಅದಕ್ಕೆ ಬದಲು ಪೊಟ್ಯಾಸಿಯಮ್, ಹೈಡ್ರೊಜನ್, ಅಮೋನಿಯಮ್ ಅಯಾನ್ ಇವು ಆಮ್ಲೀಯ ದ್ರವವಾಗುತ್ತವೆ.  ಅತಿಮೂತ್ರ ವಿರುದ್ದದ ಅಂತಸ್ರಾವದಿಂದ ಸಂಗ್ರಹನಾಳಗಳು ನೀರನ್ನು ಹೀರುತ್ತವೆ.  ಗುಚ್ಚಾಂಗ ಪಕ್ಕದ ಅಂಗವ್ಯೂಹಗಳಿಂದ (ಅಪಧಮನಿ ಸುತ್ತಲಿನ ಮತ್ತೆ ಮತ್ತು ದಟ್ಟ ಚುಕ್ಕೆ) ರೆನಿನ್ ಎಂಬ ಒಳರಸದಸುರಿಕೆ ರಕ್ತದೊಳಕ್ಕಾಗಿ ರಕ್ತದೊತ್ತಡ ಏರುತ್ತದೆ.

	ಮೂತ್ರಪಿಂಡಗಳಲ್ಲಿ ವ್ಯತ್ಯಯಗಳು ಅಪರೂಪವಲ್ಲ : 1 ಒಂದು ಕಡೆ ಮಾತ್ರ ಒಂದು ಮೂತ್ರ ಪಿಂಡವಿದ್ದು ಇನ್ನೊಂದು ಕಡೆ ಬೆಳೆಯದಿರಬಹುದು ಅಥವಾ ಅತಿ ಚಿಕ್ಕದಿರಬಹುದು.  2 ಎರಡು ಪಿಂಡಗಳೂ ಒಂದಾಗಿ ಕುದುರೆ ಲಾಳ ಅಥವಾ ಬಿಲ್ಲೆ ಆಕಾರದ ಮೂತ್ರಪಿಂಡವಾಗಿರಬಹುದು.  3 ಒಂದು ಮೂತ್ರ ಪಿಂಡ ಡಮರುಗದಂತೆ ಮಧ್ಯೆ ಸಣ್ಣದಾಗಿರಬಹುದು.  4 ಭ್ರೂಣದಲ್ಲಿ ಮೂತ್ರಪಿಂಡ ಉದರದ ಕೆಳಭಾಗಲ್ಲಿ ಬೆಳೆದು ಭ್ರೂಣವೃದ್ಧಿಯೊಡನೆ ಮೇಲಕ್ಕೇರುತ್ತ ಹೊಸ ಹೊಸ ರಕ್ತನಾಳಗಳನ್ನು ಹೊಂದುತ್ತದೆ.  ಹೀಗೆ ಮೇಲಕ್ಕೇರದೆ ದೊಡ್ಡವರಲ್ಲೂ ಶ್ರೋಣಿಯಲ್ಲೇ ಮೂತ್ರಕೋಶ ಗುದನಾಳಗಳ ನಡುವೆ ಇರಬಹುದು.  ಸ್ತ್ರೀಯರಲ್ಲಿ ಗರ್ಭಕೋಶದ ಪಕ್ಕದಲ್ಲಿರುಬಹುದು.  5 ಭ್ರೂಣವೃದ್ಧಿಯಲ್ಲಿ ಮೂತ್ರ ಜನಕನಾಳಗಳೂ ಸಂಗ್ರಹನಾಳಗಳೂ ಪ್ರತ್ಯೇಕ ಉತ್ಪತ್ತಿ ಹೊಂದಿ ಆಮೇಲೆ ಅಂತ್ಯಾಂತ್ಯ ಕೊಡುತ್ತವೆ.  ಲಕ್ಷಗಟ್ಟಲೆ ನಾಳಗಳಲ್ಲಿ ಕೆಲವು ಕೂಡದಿದ್ದರೂ ಕೂಡದ ಮೂತ್ರ ಜನಕನಾಳಗಳಲ್ಲಿ ಮೂತ್ರ ತುಂಬಿಕೊಂಡು ಕ್ರಮೇಣ ದೊಡ್ಡ ದೊಡ್ಡ ಬುಡ್ಡೆಗಳಾಗಿ ಚೆನ್ನಾಗಿರುವ ನಾಳಗಳನ್ನು ಒತ್ತುತ್ತ ಅವನ್ನೂ ಹಾಳುಮಾಡಿ ಪ್ರಾಣಕ್ಕೆ ಅಪಾಯ ಒಡ್ಡುತ್ತವೆ.  ಬುಡ್ಡೆಗಳ ಮೂತ್ರ ಪಿಂಡಗಳು ಸಾಧಾರಣವಾಗಿ ಆಗರ್ಭವಾಗಿರುತ್ತವೆ.  6 ಮೂತ್ರಪಿಂಡಗಳ ಸ್ಥಳಪಲ್ಲಟವಿರಬಹುದು ಅಥವಾ ಅವು ಸ್ಥಳಪಲ್ಲಟಗೊಳ್ಳುತ್ತಿರಬಹುದು.  ತೇಲುವ ಮೂತ್ರಪಿಂಡಗಳಾಗಿ ಸ್ಥಳ ಬದಲಾಯಿಸುತ್ತಿರುವಾಗು ಮೂತ್ರಪಿಂಡನಾಳ ಕೊಂಕಾಗಿ ಅಡಚಣೆಯಾಗಿ ಮೂತ್ರ ಪಿಂಡ ಒತ್ತಡದಿಂದ ನಶಿಸಿ ಪ್ರಾಣಕ್ಕೆ ಅಪಾಯವಾಗಬಹದು.  ಬಡಕಲಾದವರಲ್ಲಿ (ಹೆಚ್ಚು ಸ್ತ್ರೀಯರಲ್ಲಿ) ಮೂತ್ರಪಿಂಡಗಳ ಸುತ್ತಲಿನ ಕೊಬ್ಬು ನಶಿಸಿದಾಗ ಪಿಂಡಗಳೂ ಸ್ಥಳ ಪಲ್ಲಟಗೊಳ್ಳುವುದು ಹೆಚ್ಚು.  7 ಅಂತರಕಿರುಹಾಲೆ ಅಪಧಮನಿಗಳು ಅಡ್ಡ ಸೇರುವೆಗಳಿಲ್ಲದ ಅಂತ್ಯ ಅಪಧಮನಿಗಳು.  ಇವುಗಳಲ್ಲಿ ಅಡಚಣೆಯಾದಾಗ ಇತರ ಅಪಧಮನಿಗಳ ನೆರವಿಲ್ಲದೆ ರಕ್ತಚಲನೆ ನಿಂತ ಮೂತ್ರಪಿಂಡ ಭಾಗ ಸತ್ತು ನಾರು ಕಟ್ಟುತ್ತದೆ.  8 ಮೂತ್ರಪಿಂಡದ ನಾಳಗಳಲ್ಲಿ, ಕೇಲಿಕ್ಸ್‍ಗಳಲ್ಲಿ, ಶ್ರೋಣಿಯಲ್ಲಿ ಕಲ್ಲುಗಳಾಗಿ ಅಡಚಣೆಯಿಂದ ಮೂತ್ರಪಿಂಡ ಕ್ಷೀಣಿಸುತ್ತದೆ.  9 ಗಂಟಲು ನೋವಿನ ಕ್ರಿಮಿದಾಳಿಯಿಂದ ಮೂತ್ರಪಿಂಡಗಳು ಕೆಟ್ಟರೆ ಕಣ್ಣುರೆಪ್ಪೆಗಳು ಊದುತ್ತವೆ.  ಹೀಗಾಗುವುದು ಮಕ್ಕಳಲ್ಲಿ ಹೆಚ್ಚು.
(ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ